ಬಾಡಿಗೆಮನೆಯಲ್ಲಿ ಬಾಡಿಗೆ ಮನೆ
ಭೂಮಿಯ ಬಾಡಿಗೆಮನೆಯಲ್ಲಿ
ನಾನು ಬಾಡಿಗೆದಾರ.
ನಮ್ಮೂರ ಮನೆಯಲ್ಲೂ
ನಾನು ಬಾಡಿಗೆದಾರ.
ಕೆಲಸದೂರಲ್ಲೂ
ನಾನು ಬಾಡಿಗೆದಾರ.
ನನ್ನ ಮನೆ ಪದ್ಯ,
ಅರ್ಥವಾಗದ ಬಾಡಿಗೆದಾರ.
ಮತ್ತೆ ಮತ್ತೆ ವಿಳಾಸ ಬದಲಿಸುವ
ಬಾಡಿಗೆದಾರ.
ಪ್ರತಿ ವರ್ಷ ಹೆಚ್ಚು ದರ ಕಟ್ಟುವ
ಬಾಡಿಗೆದಾರ.
ಮಾಲೀಕರ ಭಕಕ್ಕೆ ಕುಗ್ಗಿಬದುಕುವ
ಬಾಡಿಗೆದಾರ.
ಸ್ವಂತಮನೆ ? ಪ್ರಶ್ನೆಗೆ ಮುಖನಾಗುವ
ಬಾಡಿಗೆದಾರ.
ಕುಂಟು ನೆಪಗಳು ಹೊರಗೆ ಹಾಕಲು,
ಮತ್ತೆ ಮನೆ ಹುಡುಕುವ ಬಾಡಿಗೆದಾರ.
ಯಾವಜನ ? ಯಾವಜಾತಿ ?
ಸಸ್ಯಹಾರಿಯೋ? ಮಾಂಸಾಹಾರಿಯೋ?
ಏನು ಕೆಲಸ? ಸೆಷ್ಟು ಸಂಬಳ?
ಮದುವೆಯಾಗಿದೆಯೋ? ತಂದೆ ತಾಯಿ ಇರುವರೋ?
ನೂರು ಪ್ರಶ್ನೆಗೆ ಸರಿಹೊಂದುವ ಉತ್ತರಹೇಳಿ,
ಬದಲಾವಣೆಗೆ ತಯಾರಾಗುವ ಬಾಡಿಗೆದಾರ.
ಆಧಾರ್ ಕೊಟ್ಟು ಠೇವಣಿ ಇಟ್ಟು
ಸಾಕ್ಷಿ ಹೇಳಿ, ಸಹಿಮಾಡಿ.
ಮತ್ತೆ ಶುರು ನಮ್ಮ ಹೊಸ-
ಬಾಡಿಗೆ ಜೀವನ, ಹೊಸ ವಿಳಾಸ.
ಕೆಲಸದಲ್ಲಿ, ಬ್ಯಾಂಕಿನಲ್ಲಿ
ಶಾಲೆಯಲ್ಲಿ, ಸಮಾಜದಲ್ಲಿ
ಕಾಳಜಿ ಇಂದ, ಅನುಮಾನದಿಂದ
ಅಣಕಿನಿಂದ, ವ್ಯಂಗ್ಯದಿಂದ
ತಿಳಿದಿದ್ದು , ತಿಳಿಯದೆಯಿದ್ದು
ಕೇಳುವರು ನಿಮ್ಮ ಸ್ವಂತಮನೇ ಏಕಿಲ್ಲ?
ಸ್ವಂತ ಮನೆ ಇಲದಕ್ಕೆ ಹಿರಿಯರನ್ನು ತೆಗಳಲೆ?
ಇದು ನನಗೆ ಅವಕಾಶ ಎಂದು ಆಶಾವಾದಿ ಯಾಗಲೇ?
ಸ್ವಂತ ಎಂದು ಏನೂಯಿಲ್ಲ ಎಂದುಕೊಂಡು ಕೂರಲೇ?
ನನ್ನಂತೆ ನೂರು ಕೋಟಿ ಜನರು ಇರುವರೆಂದು
ಸಮಾಧಾನಮಾಡಿಕೊಳ್ಳಲೇ?
ಅರುಣ್ ಸಿ ಕಲ್ಲಪ್ಪನವರ್
೨೦-೦೭-೨೦೨೫