ಕೋಟಿ ಕನ್ನಡ
ಕೋಟಿ ಕನ್ನಡ
ಕನ್ನಡ ಒಂದು ಏಕಶಿಲಾ ಭಾಷೆಯಲ್ಲ, ಕನ್ನಡ ವೈವಿಧ್ಯಮಯ ಭಾಷೆ. ಪ್ರದೇಶ, ಲಯ, ಮತ್ತು ವ್ಯಕ್ತಿಯ ಜೊತೆಗೆ ಬದಲಾಗುತ್ತದೆ. ಪದ ಬಳಕೆ, ಉಚ್ಚಾರ ಮತ್ತು ಧ್ವನಿಗಳಲ್ಲಿ ಬದಲಾವಣೆಯನ್ನು ಕಾಣಬಹುದು. ಈ ಎಲ್ಲ ವೈವಿಧ್ಯದಮೇಲೂ, ಒಂದು ಕ್ರೋಢೀಕೃತವಾದ ಕನ್ನಡ ಇದೆ; ಅದನ್ನು ಗ್ರಾಂಥಿಕ ಕನ್ನಡ ಅಥವಾ ಶುದ್ಧ ಕನ್ನಡ ಎನ್ನಬಹುದು.
ಕರ್ನಾಟಕದ ಉತ್ತರದ ಕಡೆ ಮಾತನಾಡುವ ಕನ್ನಡವನ್ನು ಕೆಲವರು ಒರಟು ಅಥವಾ ಘಾಟಿ ಅನ್ನುತ್ತಾರೆ. ಬೆಂಗಳೂರಲ್ಲಿ ಉತ್ತರಕರ್ನಾಟಕದ ಶೈಲಿಯಲ್ಲಿ ಮಾತನಾಡುವಾಗ ಕೆಲವೊಮ್ಮೆ ಅದನ್ನು ತಿದ್ದಲು ಬರುತ್ತಾರೆ. ಆದರೆ “ಗಜ್ಜರಿ”ಗೆ ಕ್ಯಾರೆಟ್ ಅನ್ನುವವರು “ಚಾ”ಗೆ ಟೀ ಅನ್ನುವವರು ಉತ್ತರಕರ್ನಾಟಕದ ಶೈಲಿಯಿಂದ ಕಲಿಯೋದಿದೆ. ಹಾಗೆ ನೋಡುವುದಾದರೆ ಒಂದು ಕ್ರೋಢೀಕೃತವಾದ ಸಾಮಾಜಿಕ ಕನ್ನಡ ಹೇಗೋ ಹಾಗೆ ಒಂದು ವೈಯಕ್ತಿಕ ಕನ್ನಡವೂ ಇದೆ, ನಾವು ಮತ್ತೊಂದು ಶೈಲಿಯಲ್ಲಿ ಮಾತನಾಡುವ ಕನ್ನಡಿಗನನ್ನು ಪ್ರತ್ಯೇಕಿಸುವಬದಲು ಅವರ ಕನ್ನಡವನ್ನು ಸ್ವೀಕರಿಸಿದರೆ, ಕನ್ನಡದ ವೈವಿಧ್ಯತೆ ಉಳಿಯುತ್ತದೆ.
ಒಂದುಬಾರಿ ಬೆಂಗಳೂರಲ್ಲಿ ಬೆಳಿಗ್ಗೆ “ನಾಷ್ಟಾ ಆಯಿತಾ?” ಅಂತಾ ಕೇಳಿದ್ದಕ್ಕೆ, ಒಬ್ಬ ಹಿರಿಯರು ಅದೆನು ನಾಷ್ಟಾ ಅಂತೀಯಾ “ತಿಂಡಿ” ಅನ್ನು ಅಂತಾ ಒತ್ತಾಯಿಸಿದರು. ಅವರಿಗೆ ಹೇಗೆ ತಿಳಿಸಲಿ ನಮಗೆ ನಾಷ್ಟಾ, ಚಾ, ರೊಕ್ಕಾ ಈ ಪದಗಳು ಸುಪ್ತಮನಸಿನಿಂದ ಬರುತ್ತವೆ ಎಂದು! ನಾನು ಮಾತನಾಡಿದ ಪದಗಳು ಬೇರೆಯಾಗಿದ್ದರೂ ಭಾಷೆ ಒಂದೇ ಅದು ಕನ್ನಡ. ನಾವು ಕನ್ನಡವನ್ನು ಏಕರೂಪತೆಗೆ ತರುವ ಕೆಲಸವನ್ನು ನಿಲ್ಲಿಸಿ, ಒಬ್ಬರ ಮೇಲೆ ನಮ್ಮ ವಿಚಾರಗಳನ್ನು ಹೇರದೆ, ಅವರವರ ಶೈಲಿಯಲ್ಲಿ ಮಾತನಾಡಲು, ಇರಲು ಬಿಟ್ಟರೆ ಕನ್ನಡ ಕೋಟಿಕನ್ನಡ ವಾಗುತ್ತದೆ.
ಜಗತ್ತಿನಲ್ಲಿ ಎಷ್ಟು ಕನ್ನಡಿಗರಿದ್ದಾರೋ ಅಷ್ಟು ಕನ್ನಡಗಳಿರಲಿ, ಕನ್ನಡ ವೈಯಕ್ತಿಕವಾಗಿಯೂ ಇರಲಿ ಸಾಮಾಜಿಕಯಾಗಿಯೂ ಇರಲಿ; ಕನ್ನಡ ವೈವಿಧ್ಯವಾಗಿರಲಿ.
ಅರುಣ್ ಸಿ ಕಲ್ಲಪ್ಪನವರ್
